ಒಳಕೂಟ: ಒಂದು ಮಾರುಕಟ್ಟೆಯಲ್ಲಿರುವ ಸರಕನ್ನೆಲ್ಲ ಕೊಂಡು ಅದರ ಏಕಸ್ವಾಮ್ಯ ಪಡೆದು ಕೃತಕ ಅಭಾವ ಏರ್ಪಡಿಸಿ ಬೆಲೆ ಏರುವಂತೆ ಮಾಡಿ ಅಧಿಕ ಬೆಲೆಯಲ್ಲಿ ಸರಕನ್ನು ಮಾರಿ ಲಾಭ ಪಡೆಯುವ ಉದ್ದೇಶದಿಂದ ಹಲವು ಸಟ್ಟಾ ವ್ಯಾಪಾರಿಗಳೂ ತಂತಮ್ಮಲ್ಲೆ ರಚಿಸಿಕೊಂಡ ಕೂಟ (ರಿಂಗ್). ವ್ಯವಹಾರ ಕೂಟ ಅಥವಾ ಮಾರಾಟಕೂಟವು (ಕಾರ್ಟೆಲ್) ಒಳಕೂಟವು ಒಂದೇ ಎಂಬುದು ಸಾಮಾನ್ಯವಾಗಿರುವ ಭಾವನೆ. ಆದರೆ ಒಳಕೂಟದ ಸದಸ್ಯರು ಸ್ವತಂತ್ರ ಉದ್ಯಮಿಗಳಲ್ಲ. ಅವರದೊಂದು ಸಂಯುಕ್ತ ಸಾಹಸ. ಬೆಲೆಯನ್ನಾಗಲಿ, ಉತ್ಪಾದನೆಯನ್ನಾಗಲಿ, ಸರಬರಾಯಿಯನ್ನಾಗಲಿ ನಿಯಂತ್ರಣಗೊಳಿಸುವ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ಎಲ್ಲ ಸರಕನ್ನೂ ಒಟ್ಟೈಸಿಕೊಂಡು, ಮಾರುಕಟ್ಟೆಯಿಂದ ಅದನ್ನು ಹಿಂತೆಗೆದುಕೊಂಡು ಕೃತಕಾಭಾವವನ್ನೇರ್ಪಡಿಸುವುದು ಸಹಜವಾದ ವ್ಯಾಪಾರಧರ್ಮವಲ್ಲ. ಸರಕನ್ನು ಕೊಳ್ಳಲು ಬಂದ ಇತರ ಎಲ್ಲರಿಗಿಂತಲೂ ಹೆಚ್ಚಿನ ಸವಾಲು ಹಾಕಿ, ಉತ್ಪಾದಕರಿಗೆ ಅತ್ಯಧಿಕ ಬೆಲೆ ಕೊಟ್ಟು, ನಷ್ಟಸಂಭವವನ್ನೂ ಎದುರಿಸಿ ನಿಂತು, ಲಾಭದ ರಾಶಿಯನ್ನೇ ದೋಚಿಕೊಳ್ಳುವುದು ಇದರ ಉದ್ದೇಶ. ಇದರ ಕಲಾಪಗಳಿಂದ ಬಳಕೆದಾರ ಹೆಚ್ಚು ಬೆಲೆ ತೆರಬೇಕಾಗಿ ಬರುವುದು ಅನಿವಾರ್ಯ, ಆದ್ದರಿಂದ ಇದು ನೀತಿಬಾಹಿರವಾದ ವ್ಯವಹಾರಕೂಟ.	(ಸಿ.ಸಿ.ಪಿ.; ಎ.ಕೆ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ